ಹಿರೊಹಿಟೊ
	1901-89. ಜಪಾನಿನ ಚಕ್ರವರ್ತಿ. ಯೋಷಿಹಿಟೊನ ಹಿರಿಯಮಗ. ಇವನು 1901ರಲ್ಲಿ ಟೋಕಿಯೋದಲ್ಲಿ ಜನಿಸಿದ. ಇವನು ಸಂಪ್ರದಾಯವನ್ನು ಉಲ್ಲಂಘಿಸಿ 1921ರಲ್ಲಿ ಯುರೋಪ್ ಪ್ರವಾಸವನ್ನು ಕೈಗೊಂಡ. ಹೀಗೆ ಪ್ರವಾಸಕೈಗೊಂಡ ಮೊದಲ ಚಕ್ರವರ್ತಿ ಈತ. ಇದೇ ವರ್ಷ ತನ್ನ ತಂದೆಯ ಉತ್ತರಾಧಿಕಾರಿಯಾಗಿ ನೇಮಿಸಲ್ಪಟ್ಟ. ತಂದೆಯ ಮರಣಾನಂತರ ಚಕ್ರವರ್ತಿಯಾಗಿ ಅಧಿಕಾರಿಕ್ಕೆ ಬಂದ(1926). ಇವನ ಜಪಾನಿ ಹೆಸರು ನಿಪೊನ್ ಕೊಕು ಟೆನ್ನೊ. ಟೆನ್ನೊ ಎಂದರೆ ಸ್ವರ್ಗದ ಅಧಿಪತಿ ಎಂದರ್ಥ. ಈತನ ಆಡಳಿತವನ್ನು ಪೋವ ಅಂದರೆ ಬೆಳಕು, ಶಾಂತಿ ಯುಗ ಎಂದು ಕರೆಯಲಾಯಿತು. ಇತರ ದೇಶಗಳೊಡನೆ ಶಾಂತಿ ಸೌಹಾರ್ದದಿಂದ ಇರುವುದೇ ತನ್ನ ಬಯಕೆಯೆಂದು ಈತ ಘೋಷಿಸಿದ. ಆದರೆ ಬಹುಬೇಗ ಜಪಾನ್ ಆಕ್ರಮಣದ ಹಾದಿಯನ್ನು ಹಿಡಿಯಿತು. 1931ರಲ್ಲಿ ಜಪಾನ್ ಮಂಚೂರಿಯದ ಮೇಲೆ ದಾಳಿ ನಡೆಯಿಸಿತು. 1941ರಲ್ಲಿ ಪರ್ಲ್‍ಹಾರ್ಬರಿನ ಮೇಲೆ ದಾಳಿನಡೆಸಿದ ಎರಡನೆಯ ಮಹಾಯುದ್ಧವನ್ನು ಜಪಾನ್ ಪ್ರವೇಶಿಸಿತು. ಯುದ್ಧಕಾಲದಲ್ಲಿ ಚಕ್ರವರ್ತಿ ಅಧಿಕಾರದಲ್ಲಿದ್ದರೂ ಮಿಲಿಟರಿ ಅಧಿಕಾರಿಗಳು ಅನೇಕ ಮುಖ್ಯ ನಿರ್ಧಾರಗಳಿಗೆ ಕಾರಣರಾದರು. ಮಿತ್ರರಾಷ್ಟ್ರಗಳು ಸೇರಿ ಜಪಾನನ್ನು ಯುದ್ಧದಲ್ಲಿ ಸೋಲಿಸಿದಾಗ (1945) ಇವನಿಗೆ ಎಂದಿನಂತೆ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರು. ಜಪಾನ್ ಮಹಾಯುದ್ಧಕ್ಕೆ ಪ್ರವೇಶಿಸುವುದಕ್ಕೆ ಈತ ಹೊಣೆಯಲ್ಲವೆಂದೂ ಇವನ ಸೈನ್ಯಾಧಿಕಾರಿಗಳು ಇದಕ್ಕೆ ಜವಾಬ್ದಾರರೆಂದೂ ಮಿತ್ರ ರಾಷ್ಟ್ರಗಳು ತೀರ್ಮಾನಿಸಿದವು. 1946ರ ನೂತನ ರಾಜ್ಯಾಂಗದಿಂದ ಚಕ್ರವರ್ತಿಯ ಸ್ಥಾನಮಾನಗಳಲ್ಲಿ ಮಹತ್ತರ ಬದಲಾವಣೆಗಳಾದುವು. ಚಕ್ರವರ್ತಿ ಹಿರೊಹಿಟೊ ಅಧಿಕೃತವಾಗಿ ತನ್ನ ದೈವತ್ವವನ್ನು ನಿರಾಕರಿಸಿದ. ಇದರಿಂದ ಚಕ್ರವರ್ತಿ ಸಮಾಜದೊಂದಿಗೆ ನೇರ ಸಂಪರ್ಕವನ್ನಿಟ್ಟುಕೊಳ್ಳಲು ಅವಕಾಶ ದೊರೆಯಿತು. 1947ರಲ್ಲಿ ಈತನ ಅಧಿಕಾರವನ್ನು ಸಂಪೂರ್ಣವಾಗಿ ತೆಗೆದುಕೊಂಡು ಇವನನ್ನು ಹೆಸರಿಗೆ ಮಾತ್ರ ಚಕ್ರವರ್ತಿಯೆಂದು ಮಾನ್ಯಮಾಡಲಾಯಿತು. ಪ್ರಜಾಪ್ರಭುತ್ವ ಅರಸನಾದ ಈತ ಹೊಸ ಸಂವಿಧಾನವನ್ನು ಅಂಗೀಕರಿಸಿದ(1947). ಇವನು 1989ರಲ್ಲಿ ನಿಧನಹೊಂದಿದ. 											
(ಎಸ್.ಎಮ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ